ಉಡುಪಿ: ದಕ್ಷಿಣ ಭಾರತದಾದ್ಯಂತ ಹೆಸರು ಮಾಡಿರುವ, ಪ್ರಸಿದ್ಧ ಹೊಟೇಲ್ ಉದ್ಯಮಿ ಜಯರಾಮ್ ಬನಾನ್ ಅವರ ಓಷಿಯನ್ ಪರ್ಲ್ ಹೊಟೇಲ್ ಪ್ರೈ.ಲಿ.ನ ಉಡುಪಿಯ ಎರಡನೇ ಶಾಖೆ “ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್’ ಕಲ್ಸಂಕದ ಬಳಿ ಇರುವ ಟೈಮ್ಸ್ ಸ್ಕ್ವೇರ್ ಮಾಲ್ನಲ್ಲಿ ಬುಧವಾರ ಉದ್ಘಾಟನೆಗೊಂಡಿತು.
ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಜಂಟಿಯಾಗಿ ಹೋಟೆಲ್ ಉದ್ಘಾಟಿಸಿದರು.
ಪೇಜಾವರ ಶ್ರೀಪಾದರು ಆಶೀರ್ವದಿಸಿ, ಶ್ರೀ ಕೃಷ್ಣನ ನಾಡಾದ ಉಡುಪಿಗೆ ಉದ್ಯಮಿ ಜಯರಾಮ್ ಬನಾನ್ ಅವರು ಈ ಹೊಟೇಲ್ ಮೂಲಕ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಶ್ರೀ ಕೃಷ್ಣನ ಪೂರ್ಣಾನುಗ್ರಹದಿಂದ ಉದ್ಯಮ ಯಶಸ್ವಿಯಾಗುವುದರೊಂದಿಗೆ ಜನತೆಗೂ ಇದರ ಪ್ರಯೋಜನ ದೊರಕಲಿ ಎಂದು ಆಶೀಸಿದರು.
ಸುಬ್ರಹ್ಮಣ್ಯ ಶ್ರೀಪಾದರು ಅನುಗ್ರಹ ಸಂದೇಶ ನೀಡಿ, ಉಡುಪಿ ಹೊಟೇಲ್ ಉದ್ಯಮಕ್ಕೆ ಜಗತಸಿದ್ಧ. ಆದಿರಾತಿಥ್ಯ, ಶುಚಿ-ರುಚಿಗೆ ಉಡುಪಿ ಹೊಟೇಲ್ ಶ್ರೇಷ್ಠತೆಯನ್ನು ಸಾಧಿಸಿದೆ.
ಜಯರಾಮ್ ಬನಾನ್ ಅವರು ಬಹಳ ಪರಿಶ್ರಮದಿಂದ ಸಂಸ್ಥೆಯನ್ನು ಕಟ್ಟಿದ್ದಾರೆ. ಅವರಿಗಿದ್ದ ಹೊಟೇಲ್ ಉದ್ಯಮದ ಅಪಾರವಾದ ಅನುಭವ, ಶ್ರದ್ಧೆ, ಪ್ರಾಮಾಣಿಕತೆಯ ಜತೆಗೆ ದೇವರ ಅನುಗ್ರಹದಿಂದ ಯಶಸ್ಸು ಸಾಧಿಸಿ ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಉದ್ಯಮ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ ಎಂದು ಹರಸಿದರು.ಉಡುಪಿ ಧರ್ಮಪ್ರಾಂತದ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೋ ಅವರು ಭೇಟಿ ನೀಡಿ ಶುಭ ಹಾರೈಸಿದರು.
ಶಾಸಕ ಯಶ್ಪಾಲ್ ಎ. ಸುವರ್ಣ ಸೂಟ್ ರೂಮ್ ಉದ್ಘಾಟಿಸಿದರು. ಶಾಸಕ ವಿ. ಸುನಿಲ್ ಕುಮಾರ್ ಮತ್ತು ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಕೆ. ರಘುಪತಿ ಭಟ್, ಪ್ರಮುಖರಾದ ಮಣಿಪಾಲ್ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ನ ಕಾರ್ಯನಿರ್ವಾಹಕ ಅಧ್ಯಕ್ಷ ಟಿ. ಸತೀಶ್ ಯು. ಪೈ, ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್ ಕುಮಾರ್, ಹರ್ಷ ಸಂಸ್ಥೆಯ ಆಡಳಿತ ನಿರ್ದೇಶಕ ಸೂರ್ಯಪ್ರಕಾಶ್ ಕೆ. ಮತ್ತು ಸಹೋದರರು, ಮಟ್ಟಾರು ರತ್ನಾಕರ ಹೆಗ್ಡೆ, ಜಗದೀಶ್ ಅಧಿಕಾರಿ, ಮನೋಹರ ಎಸ್. ಶೆಟ್ಟಿ, ಬಿ. ಜಯಕರ ಶೆಟ್ಟಿ ಇಂದ್ರಾಳಿ, ಇಬ್ರಾಹಿಂ ಕೋಡಿ, ಸಂಸ್ಥೆಯ ಅಧ್ಯಕ್ಷ ಜಯರಾಮ ಬನಾನ್, ಎಂಡಿ ರೋಶನ್ ಬನಾನ್, ಉಪಾಧ್ಯಕ್ಷ ಶಿವಕುಮಾರ್ ಎನ್., ಪ್ರಧಾನ ವ್ಯವಸ್ಥಾಪಕ ಪ್ರಶಾಂತ್ ಆಚಾರ್ಯ, ಟೈಮ್ಸ್ ಸ್ಕ್ವೇರ್ ಮಾಲ್ನ ಮಾಲಕ ಡಾ| ಜೆರ್ರಿ ವಿನ್ಸೆಂಟ್ ಡಯಾಸ್, ಮಾಂಡವಿ ಬಿಲ್ಡರ್ಸ್ ಸಂಸ್ಥೆಯ ಗ್ಲೆನ್ ಡಯಾಸ್, ಜೇಸನ್ ಡಯಾಸ್ ಉಪಸ್ಥಿತರಿದ್ದರು.
ಓಷಿಯನ್ ಪರ್ಲ್ ಸಮೂಹ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಬಿ.ಎನ್. ಗಿರೀಶ್, ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.